welcome to lavalavika


I made this widget at MyFlashFetish.com.

Saturday, July 30, 2011

ಗೊ.ರು.ಚನ್ನಬಸಪ್ಪ



        ಗೊ.ರು.ಚನ್ನಬಸಪ್ಪ ಅವರು ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕು ಗೊಂಡೆದಹಳ್ಳಿಯಲ್ಲಿ 1930ರಲ್ಲಿ ಜನಿಸಿದರು.

 ಗ್ರಾಮೀಣ ಪರಿಸರದಲ್ಲೇ ಬೆಳೆದ ಅವರಿಗೆ ಸಾಹಿತ್ಯ, ಸಂಸ್ಕೃತಿ ಸಾಮಾಜಿಕ ಚಟುವಟಿಕೆಗಳಲ್ಲಿ ಹೇಗೆ ಆಸಕ್ತಿ ಉಂಟಾಯಿತೆಂದು ಸ್ಪಷ್ಟವಾಗಿ ಹೇಳಲಾರೆ. ಅವರು ಮಾಧ್ಯಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗ ಸ್ವಾತಂತ್ರ್ಯ ಚಳವಳಿಯ ಕಾಲ. ಅವರು ಚಳವಳಿಯಲ್ಲಿ ಪಾಲುಗೊಂಡರು. ಆ ಸಂದರ್ಭದಲ್ಲಿ ಸಿದ್ಧವನಹಳ್ಳಿ ನಿಜಲಿಂಗಪ್ಪನವರು, ಗುದ್ಲೆಪ್ಪ ಹಳ್ಳಿಕೇರಿ, ಮೊದಲಾದ ನಾಡ ಅಭಿಮಾನಿಗಳನ್ನು ನಿಕಟವಾಗಿ ನೋಡಲು ಅವಕಾಶವಾಯಿತು ಅವರಿಗೆ. ಅವರ ನಡೆ-ನುಡಿಗಳು ಅವರ ಮೇಲೆ ಪ್ರಭಾವ ಬೀರಿದವು.
   ಅವರು ಪ್ರೌಢಶಾಲೆ ಕಲಿತದ್ದು ಬೀರೂರಿನಲ್ಲಿ. ಸ್ವಾತಂತ್ರ್ಯ ಚಳವಳಿ ಭಾಗವಾಗಿ ಪ್ರತಿದಿನ ಬೆಳಗ್ಗೆ ನಡೆಯುತ್ತಿದ್ದ ಪ್ರಭಾತ್‌ಭೇರಿಯಲ್ಲಿ ಸ್ವಾತಂತ್ರ್ಯ ಗೀತೆಗಳನ್ನು  ಅವರೇ ಹಾಡುತ್ತಿದ್ದರಂತೆ. ಅವುಗಳಲ್ಲಿ ಒಂದು ಗೀತೆಯ ಒಂದೆರಡು ಸಾಲುಗಳು ಇನ್ನೂ ಅವರಿಗೆ ನೆನಪಿನಲ್ಲಿವೆ: "ಓ ತಮ್ಮ, ಓ ತಂಗಿ, ಓ ಏನಂತಿ? ಹಾಕಬೇಕು ಇನ್ನು ಖಾದಿ, ಹಿಡಿಬೇಕು ಹಳ್ಳಿ ಹಾದಿ, ಓ ಏನಂತಿ?" ಆ ಸಾಲುಗಳೇ ಅವರ ಬದುಕಿನ ಸೂತ್ರಗಳಾದವು. ಅಂದಿನಿಂದ ಹುಟ್ಟಿದ ಹಳ್ಳಿಯ ಸೇವೆ ಅವರ ಕರ್ತವ್ಯಗಳಲ್ಲಿ ಒಂದಾಯಿತು. ಖಾದಿ ಧರಿಸುವುದು ಅವರಿಗೆ ರೂಢಿಯಾಯಿತು. ಈ ಎರಡನ್ನು ಇಂದಿಗೂ ಪರಿಪಾಲಿಸಿಕೊಂಡು ಬಂದಿದ್ದಾರೆ.
        ಅವರ ವೃತ್ತಿ ಜೀವನ ಆರಂಭವಾದದ್ದು ಪ್ರಾಥಮಿಕ ಶಾಲಾ ಶಿಕ್ಷಕನಾಗಿ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ಅವರು ಸರ್ಕಾರಿ ಸೇವೆಗೆ ಸೇರಿದರು. ಅಂದಿಗಿಂತ ಇಂದು ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಪ್ರಯೋಗಗಳಾಗಿವೆ. ಸುಧಾರಣೆಗಳೂ ಆಗಿವೆ. ಆದರೆ ಈ ಎಲ್ಲವೂ ಕೇವಲ ಜೀವನೋಪಾಯಕ್ಕೆ ಒತ್ತು ಕೊಡುತ್ತಿವೆಯೇ ವಿನಃ ವ್ಯಕ್ತಿ ನಿರ್ಮಾಣದ ಕಡೆ ಗಮನ ಕೊಟ್ಟಿಲ್ಲವೆಂದೇ ನನಗನಿಸುತ್ತದೆ. ವಾಸ್ತವವಾಗಿ ಶಿಕ್ಷಣದ ಮೂಲ ಉದ್ದೇಶವೇ ವ್ಯಕ್ತಿ ನಿರ್ಮಾಣ. ವಿದ್ಯಾರ್ಥಿಗಳಲ್ಲಿ ಅಧ್ಯಯನ ಶ್ರದ್ಧೆ, ರಾಷ್ಟ್ರನಿಷ್ಠೆ, ಸಾಮಾಜಿಕ ಬದ್ಧತೆ, ವೈಯಕ್ತಿಕ ಚಾರಿತ್ರ್ಯ, ಸಮಷ್ಟಿ ಪ್ರಜ್ಞೆ, ಅರ್ಪಣಾಭಾವದ ಸೇವಾಸಕ್ತಿ, ಇತ್ಯಾದಿ ನೈತಿಕ ಗುಣಗಳನ್ನು ಮೈಗೂಡಿಸದಿದ್ದರೆ ಶಿಕ್ಷಣಕ್ಕೆ ಏನು ಅರ್ಥವಿರುತ್ತದೆ? "ಪ್ರತಿಯೊಂದು ಮಗುವೂ ಹುಟ್ಟುವಾಗ ಪ್ರತಿಭಾನ್ವಿತವಾಗೇ ಇರುತ್ತದೆ. ಶಾಲೆ-ಕಾಲೇಜುಗಳು ಆ ಪ್ರತಿಭೆಯನ್ನು ಹಾಳುಗೆಡವುತ್ತವೆ" ಎಂಬ ಒಂದು ಮಾತಿದೆ. ಈ ಮಾತನ್ನು ನಮ್ಮ ಶಿಕ್ಷಣ ನೀತಿ ನಿರೂಪಕರು, ಶಿಕ್ಷಣ ಮೇಲ್ವಿಚಾರಕರು, ಮಕ್ಕಳ ಪೋಷಕರು, ವಿಶೇಷವಾಗಿ ಶಿಕ್ಷಕರು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು.
     ಶಿಕ್ಷಣ ಕ್ಷೇತ್ರವೆಂದರೆ ಶಿಕ್ಷಕನ ಪಾತ್ರವೇ ಮುಖ್ಯವಾಗುತ್ತದೆ. ಸ್ವಾತಂತ್ರ್ಯಪೂರ್ವದ ಮತ್ತು ಸ್ವಾತಂತ್ರ್ಯ ಬಂದ ಆರಂಭದ ಒಂದೆರಡು ದಶಕಗಳಲ್ಲಿ ಇದ್ದ ಶಿಕ್ಷಕರ ಸಮರ್ಪಣ ಭಾವದ ಸೇವೆಯನ್ನು ಇಂದು ಕಾಣಲಾಗುತ್ತಿಲ್ಲ ಎನ್ನುವುದು ಅತ್ಯಂತ ದುಃಖದ ಸಂಗತಿ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಕೇವಲ ಯಾಂತ್ರಿಕ ಸೇವೆ ಸಲ್ಲಿಸುವಂತಾದರೆ ಅದು ಹಳ್ಳಿಯ ಮಕ್ಕಳಿಗೆ ಬಗೆದ ದ್ರೋಹವಾಗುತ್ತದೆ.
        ಅವರು ಸುಮಾರು ೧೫ ವರ್ಷಗಳ ಕಾಲ ಪ್ರಾಥಮಿಕ ಶಾಲೆ ಉಪಾಧ್ಯಾಯನಾಗಿದ್ದರು. ಅವರು ಕೆಲಸ ಮಾಡಿದ ೩-೪ ಹಳ್ಳಿಗಳಲ್ಲಿ ಅಲ್ಲಿನ ಶಾಲೆಗಳಿಗೆ ಅಗತ್ಯವಾದ ಪಾಠ-ಪೀಠೋಪಕರಣಗಳು, ಅಕ್ಕ-ಪಕ್ಕದ ಹಳ್ಳಿಗಳಿಂದ ಶಾಲೆಗೆ ಬರುತ್ತಿದ್ದ ಮಕ್ಕಳಿಗೆ ಮಧ್ಯಾಹ್ನದ ಉಪಾಹಾರ-ಮೊದಲಾದ ಸೌಲಭ್ಯಗಳನ್ನು ಆಯಾ ಹಳ್ಳಿಗಳ ಜನರ ಸಹಾಯ-ಸಹಕಾರಗಳಿಂದಲೇ ಕಲ್ಪಿಸಿದ ತೃಪ್ತಿ ಅವರದು. ಒಂದು ಹಳ್ಳಿಯಲ್ಲಿ ಮಕ್ಕಳಿಗೆ ಕೂರಲು ಸ್ಥಳಾವಕಾಶವಿರಲಿಲ್ಲ. ಆಗ ಪೋಷಕರೊಡನೆ ಸಮಾಲೋಚಿಸಿ, ಅಗತ್ಯ ಸಾಮಾಗ್ರಿಗಳನ್ನು ಸಂಗ್ರಹಿಸಿ, ಮಕ್ಕಳ ಶ್ರಮದಾನದಿಂದಲೇ ಒಂದು ಮಣ್ಣಿನ ಗೋಡೆಯ ಕೊಠಡಿ ನಿರ್ಮಿಸಿ, ಅದರಲ್ಲಿ ತರಗತಿ ನಡೆಸಿದ್ದನ್ನು ಅವರು  ಮರೆಯುವುದಿಲ್ಲ.
    ಕನ್ನಡ ಸಾಹಿತ್ಯ ಪರಿಷತ್ತಿಗೆ ಅವರು ಅಧ್ಯಕ್ಷನಾಗುವ ಮುನ್ನ ಅದರ ಕಾರ್ಯದರ್ಶಿಯೂ ಆಗಿದ್ದರು. ಆ ಕಾಲದ ಕಷ್ಟವನ್ನು ಈಗ ಹೇಳಿಕೊಂಡು ಫಲವಿಲ್ಲ. ಹಿಂದೊಂದು ಸಮ್ಮೇಳನ ಸಂದರ್ಭದಲ್ಲಿ ದಿ.ಹಾ.ಮಾ.ನಾಯಕ ಅವರು ’ಒಬ್ಬ ಕನ್ನಡಿಗ ಒಂದು ರೂ. ಕೊಟ್ಟರೂ ಸಾಕು ಮುನ್ನಿಲ್ಲದಂತೆ ಕನ್ನಡದ ಕೆಲಸ ಮಾಡಬಹುದು ಎಂದಿದ್ದರು. ಆ ಮಾತಿನ ಎಳೆ ಹಿಡಿದ ಅವರು ’ಒಬ್ಬ ಕನ್ನಡಿಗ-ಒಂದು ರೂಪಾಯಿ’ ಯೋಜನೆ ಆರಂಭಿಸಿದೆ. ಯಾವುದೇ ಹೊಸ ವಿಚಾರಕ್ಕೆ ಬಂದಂತೆ ಅದಕ್ಕೂ ನಾನಾ ರೂಪದ ಪ್ರತಿಕ್ರಿಯೆಗಳು ಬಂದವು. ಹಲವು ರೀತಿಯ ಅನುಮಾನಗಳು ವ್ಯಕ್ತವಾದುವು. ಆದರೆ ಅವರಿಗೆ ವಿಶ್ವಾಸವಿತ್ತು. ಕೈಗೊಂಡ ಯೋಜನೆ ಆಶಾದಾಯಕವಾಗೇ ಆರಂಭವಾಯಿತು. ಅದು ಇಲ್ಲಿಗೆ ೧೭ ವರ್ಷಗಳ ಹಿಂದಿನ ಮಾತು. ಆಗ ಸುಮಾರು ೨೦-೦೦ ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಯಿತು. ಬಹುಶಃ ಅದನ್ನು ಹಾಗೆಯೇ ಮುಂದುವರಿಸಿದ್ದರೆ ಇಷ್ಟು ಹೊತ್ತಿಗೆ ಐದಾರು ಕೋಟಿ ರೂ.ಗಳೇ ಸಂಗ್ರಹವಾಗುತ್ತಿತ್ತು.
     ಆದರೆ, ಈಗ ಸರ್ಕಾರವೇ ವರ್ಷಕ್ಕೆ ಕೋಟ್ಯಂತರ ರೂ.ಗಳ ನೆರವು ಕೊಡಲು ಆರಂಭಿಸಿದೆ. ಈ ನೆರವು ಬರುವುದೇನೋ ಸಂತೋಷವೇ. ಇಂತಹ ಪ್ರಾತಿನಿಧಿಕ ಸಂಘಟನೆಗಳಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯವೂ ಹೌದು. ಆದರೆ, ಅದರಲ್ಲಿ ಜನರ ಪಾಲುಗಾರಿಕೆ ಇದ್ದಂತಾಗುವುದಿಲ್ಲ. ಸುಲಭವಾಗಿ ದೊರೆಯುವ ನೆರವು ಯಾವಾಗಲೂ ನಮ್ಮ ಕ್ರಿಯಾಶೀಲತೆಯನ್ನು ಹಾಳು ಮಾಡುತ್ತದೆ. ಸಾಹಿತ್ಯ ಪರಿಷತ್ತು ಕೇವಲ ಸರ್ಕಾರದ ಅನುದಾನದ ಒಂದು ಮನೆಯಾಗಬಾರದು ಅದಕ್ಕೆ ಸಾಹಿತಿಗಳ ಶ್ರಮದ ಸಂಭವವೂ ಸೇರಬೇಕು. ಕನ್ನಡಿಗರ ಕೊಡುಗೆಯೂ ಕೂಡಬೇಕು.
      ಇನ್ನು ಸರ್ಕಾರ ಅನುದಾನ ಕೊಟ್ಟ ಮಾತ್ರಕ್ಕೆ ಪರಿಷತ್ತು ಸರ್ಕಾರದ ಹಂಗಿನಲ್ಲಿರುಬೇಕೆಂದೇನೂ ಇಲ್ಲ. ಪರಿಷತ್ತಿನಂತಹ ಪ್ರಾತಿನಿಧಿಕ ಸಾಂಸ್ಕೃತಿಕ ಸಂಘಟನೆ ಸರ್ಕಾರದ ಅನುದಾನ ಪಡೆಯುವುದು ಅದರ ಹಕ್ಕು. ಅನುದಾನ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಆ ಅನುದಾನವನ್ನೇ ಅವಲಂಬಿಸುವುದಕ್ಕಿಂತ ತನ್ನ ಸಂಪನ್ಮೂಲಗಳನ್ನು ರೂಢಿಸಿಕೊಳ್ಳುವುದು ಹೆಚ್ಚು ಆರೋಗ್ಯಕರ.
      ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದಾಗ ಹಣದ ಕೊರತೆ ಅಗಾಧವಾಗಿತ್ತಾದರೂ, ಅವರಿಗಿದ್ದ ಜನಸಂಪರ್ಕವನ್ನು ಬಳಸಿಕೊಂಡು, ಪರಿಷತ್ತಿನ ಘನತೆ-ಗೌರವಗಳಿಗೆ ತಕ್ಕಂತೆ ಅದನ್ನು ನಿರ್ವಹಿಸಿದ ತೃಪ್ತಿ ಅವರಿಗಿದೆ.
ಆಗ ಅವರು ಸರ್ಕಾರದ ಒಂದು ಬಿಡಿಕಾಸಿನ ನೆರವೂ ಇಲ್ಲದೆ ಕೇವಲ ಕನ್ನಡ ಬಂಧುಗಳ ಸಹಕಾರದಿಂದ ನಡೆಸಿದ ವಿಶಿಷ್ಟ ಕಾರ್ಯಕ್ರಮಗಳೆಂದರೆ, ಸಾಹಿತ್ಯದ ವಿವಿಧ ಪ್ರಕಾರ ಮತ್ತು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜ್ಯದ ಬೇರೆ ಬೇರೆ ಕಡೆ ಕಾವ್ಯ ಸಾಹಿತ್ಯ, ನಾಟಕ ಸಾಹಿತ್ಯ, ಮಕ್ಕಳ ಸಾಹಿತ್ಯ, ಮಹಿಳಾ ಸಾಹಿತ್ಯ, ಚಲನಚಿತ್ರ ಸಾಹಿತ್ಯ, ಚಾರಣ ಸಾಹಿತ್ಯ, ಮಾಧ್ಯಮ ಸಾಹಿತ್ಯ, ಜನಪದ ಸಾಹಿತ್ಯ ಮುಂತಾದ ಸಮಾವೇಶಗಳು. ಈ ಸಮಾವೇಶಗಳಿಂದಾಗಿ ಆಯಾ ಕ್ಷೇತ್ರದ ಲೇಖಕರು, ಚಿಂತಕರು ಮತ್ತು ಆಸಕ್ತರು ಒಂದು ಕಡೆ ಕೂಡಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶವಾಯಿತು.
ಅವರ ಅವಧಿಯ ಮತ್ತೊಂದು ಮಹತ್ವದ ಕಾರ್ಯವೆಂದರೆ ಪರಿಷತ್ತಿನ ದತ್ತಿನಿಧಿ ಯೋಜನೆಗೆ ಹೊಸ ಚಾಲನೆ ಕೊಟ್ಟಿದ್ದು. ಅದಕ್ಕೆ ದೊರೆತ ಪ್ರತಿಕ್ರಿಯೆ ನಿಜಕ್ಕೂ ಹೃದಯ ತುಂಬಿ ಬರುವಂತಹುದು. ನೂರು-ಸಾವಿರ ರೂ.ಗಳ ದತ್ತಿ ಕೊಡುಗೆಗಳ ಮೊತ್ತ ಲಕ್ಷ-ಲಕ್ಷ ರೂ ಗಳಿಗೆ ಹೆಚ್ಚಿತು. ಬಹುಶಃ ಆ ದತ್ತಿಗಳ ಸಂಖ್ಯೆ ಈಗ ಸಾವಿರಗಟ್ಟಲೆ ಆಗಿರಬಹುದು. ಅಂತಹ ಕೊಡುಗೆಗಳ ಮೊತ್ತವೂ ಕೋಟಿಗಟ್ಟಲೆ ಆಗಿರಬಹುದು. ಕನ್ನಡ ಸಂಬಂಧದ ಒಂದಲ್ಲ ಒಂದು ಚಟುವಟಿಕೆ ರಾಜ್ಯದ ಒಂದಲ್ಲ ಒಂದು ಕಡೆ ಇಡೀ ವರ್ಷ ನಡೆಯಲು ಈ ದತ್ತಿ ನಿಧಿ ಯೋಜನೆ ನೆರವಾಗಿದೆ. ಇದೊಂದು ಶಾಶ್ವತ ವ್ಯವಸ್ಥೆ.
      ಅವರ ಅವಧಿಯಲ್ಲಿ ಪರಿಷತ್ತಿನಲ್ಲಿ ನಡೆಸಿದ ಎಲ್ಲ ಸಾಹಿತ್ಯ-ಸಂಸ್ಕೃತಿ ಚಟುವಟಿಕೆಗಳೂ ಅವರ ನೆನಪಿನಲ್ಲಿ ಉಳಿದಿಲ್ಲ. ಆದರೆ, ಸಂಶೋಧನ ವಿಭಾಗದ ವಿಶೇಷ ಉಪನ್ಯಾಸಗಳು, ಪಶ್ಚಿಮಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ನಡೆಸಿದ ಸಾಹಿತ್ಯ ವಿನಿಮಯ ಕಾರ್ಯಕ್ರಮಗಳು, ಕನ್ನಡ ನಾಡಗೀತೆಗಳ ಧ್ವನಿಸುರುಳಿ ನಿರ್ಮಾಣ, ಸಮ್ಮೇಳನ ಸಂದರ್ಭದಲ್ಲಿ ಗೀತ-ಸಂಗೀತ ಕಾರ್ಯಕ್ರಮ, ನಿಘಂಟು ಯೋಜನೆ ಪೂರ್ಣಗೊಳಿಸಿದ್ದು, ಪರಿಷತ್ತಿನ ಸಿಬ್ಬಂದಿಯನ್ನು ಸರ್ಕಾರದ ಅನುದಾನ ಸಂಹಿತೆಗೆ ಒಳಪಡಿಸಿದ್ದು, ಪ್ರಪ್ರಥಮವಾಗಿ ಪರಿಷತ್ತಿನ ವೇದಿಕೆಯಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಿದ್ದು, ವಿದೇಶ ನಿವಾಸಿ ಕನ್ನಡಿಗರಿಂದ ಪರಿಷತ್ತಿಗೆ ಕೊಡುಗೆ ಸಂಗ್ರಹಿಸಿದ್ದು, ಕನ್ನಡ ಪರ ಚಳವಳಿಗಳಲ್ಲಿ ಕ್ರಿಯಾತ್ಮಕವಾಗಿ ಪಾಲುಗೊಂಡಿದ್ದು, ಪರಿಷತ್ತಿನ ಕಾರ್ಯಕ್ರಮಗಳ ವ್ಯವಸ್ಥೆಯಲ್ಲಿ ಕನ್ನಡ ಕಾರ್ಯಕರ್ತರನ್ನು ಸ್ವಯಂ ಸೇವಕರನ್ನಾಗಿ ಪಡೆದದ್ದು-ಹೀಗೆ ಕೆಲವು ಕಾರ್ಯಚಟುವಟಿಕೆಗಳನ್ನು ಮಾತ್ರ ನೆನಪು ಮಾಡಿಕೊಳ್ಳಬಹುದು. ಏನೇ ಇದ್ದರೂ ಪರಿಷತ್ತಿನಲ್ಲಿ ಅವರ ಸೇವಾವಧಿ ನನಗೆ ತೃಪ್ತಿ ತಂದಿದೆ.





No comments:

Post a Comment