welcome to lavalavika


I made this widget at MyFlashFetish.com.

Sunday, April 24, 2011

ಸಾಲು ಮರದ ತಿಮ್ಮಕ್ಕ

 













        ಸಾಲುಮರದ ತಿಮ್ಮಕ್ಕ - ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ. ಹೆದ್ದಾರಿಯ ೪ ಕಿ.ಮೀ. ಉದ್ದಳತೆಯಲ್ಲಿ ೨೮೪ ಆಲದ ಮರಗಳನ್ನು ನೆಟ್ಟು, ಆ ಮರಗಳನ್ನು ಪೋಷಿಸಿದ ಇವರ ಕೆಲಸವನ್ನು ಇಂದು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ.
ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್‌ಲ್ಯಾಂಡ್, ಕ್ಯಾಲಿಫೋರ್ನಿಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ.

ಮುಂಚಿನ ಜೀವನ

ತಿಮ್ಮಕ್ಕ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಳಿಕಲ್ ಗ್ರಾಮದವರು. ಇವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಲಭ್ಯವಾಗದೆ ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡಿದರು. ಇವರು ಚಿಕ್ಕಯ್ಯ ಎಂಬ ಒಬ್ಬ ದನಕಾಯುವವರನ್ನು ಮದುವೆಯಾಗಿದ್ದು, ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ತಿಮ್ಮಕ್ಕ ಅವರು ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ಆಲದ ಮರಗಳನ್ನು ನೆಡಲಾರಂಭಿಸಿದರು ಎಂದು ಹೇಳಲಾಗಿದೆ.

ಸಾಧನೆ

ತಿಮ್ಮಕ್ಕ ಅವರ ಹಳ್ಳಿಯ ಬಳಿ ಆಲದ ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಅವರ ಪತಿ ಈ ಮರಗಳಿಂದ ಸಸಿಗಳನ್ನು ಕಸಿಮಾಡಲು ಆರಂಭಿಸಿದರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ ೪ ಕಿ.ಮೀ. ಉದ್ದಳತೆಯ ದೂರ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ ೨೦ ಸಸಿಗಳನ್ನು ನೆಡಲಾಯಿತು.ಇವರು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಈ ಗಂಡ-ಹೆಂಡಿರು ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರನ್ನು ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಹಾಗೂ ಸಸಿಗಳನ್ನು ಮೇವಿನ ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ ಕಾಪಾಡಿದರು.
ಸಸಿಗಳು ಬೆಳೆಯಲು ನೀರಿನ ಅವಶ್ಯಕತೆಯಿರುವುದರಿಂದ, ಅವಗಳನ್ನು ಹೆಚ್ಚಾಗಿ ಮುಂಗಾರು ಮಳೆಯ ಕಾಲದಲ್ಲಿ ನೆಡಲಾಯಿತು. ಮುಂದಿನ ಮುಂಗಾರಿನಷ್ಟು ಹೊತ್ತಿಗೆ ಈ ಎಲ್ಲ ಸಸಿಗಳು ಚೆನ್ನಾಗಿ ಬೇರು ಬಿಟ್ಟಿದ್ದವು. ಒಟ್ಟಾರೆ ೨೮೪ ಸಸಿಗಳನ್ನು ನೆಡಲಾಗಿ, ಇಂದಿಗೆ ಅವುಗಳ ಮೌಲ್ಯವು ಸುಮಾರು ೧೫ ಲಕ್ಷ ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ. ಈ ಮರಗಳ ನಿರ್ವಹಣೆಯನ್ನು ಈಗ ಕರ್ನಾಟಕ ಸರ್ಕಾರವು ವಹಿಸಿಕೊಂಡಿದೆ.

ಪ್ರಶಸ್ತಿಗಳು

ತಮ್ಮ ಸಾಧನೆಗಾಗಿ ತಿಮ್ಮಕ್ಕ ಅವರಿಗೆ ಈ ಕೆಳಗಿನ ಸನ್ಮಾನಗಳು ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.
  • ರಾಷ್ಟ್ರೀಯ ಪೌರ ಪ್ರಶಸ್ತಿ - ೧೯೯೫
  • ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ - ೧೯೯೭
  • ವೀರಚಕ್ರ ಪ್ರಶಸ್ತಿ - ೧೯೯೭
  • ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ - ಇವರಿಂದ ಮಾನ್ಯತೆಯ ಪ್ರಮಾಣ ಪತ್ರ
  • ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಬೆಂಗಳೂರು - ಇವರಿಂದ ಶ್ಲಾಘನೆಯ ಪ್ರಮಾಣ ಪತ್ರ.
  • ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ - ೨೦೦೦
  • ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ - ೨೦೦೬
  • ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ

ಪ್ರಸ್ತುತದ ಚಟುವಟಿಕೆಗಳು

ತಿಮ್ಮಕ್ಕ ಅವರ ಪತಿ ೧೯೯೧ರಲ್ಲಿ ಮೃತಪಟ್ಟರು. ಇಂದು, ಭಾರತದಲ್ಲಿ ಹಲವಾರು ಕಾಡು ಬೆಳೆಸುವ ಕಾರ್ಯಕ್ರಮಗಳಿಗೆ ತಿಮ್ಮಕ್ಕ ಅವರನ್ನು ಆಹ್ವಾನಿಸಲಾಗುತ್ತದೆ.ತಮ್ಮ ಹಳ್ಳಿಯ ವಾರ್ಷಿಕ ಜಾತ್ರೆಗಾಗಿ ಮಳೆ ನೀರು ಶೇಖರಿಸಲು ದೊಡ್ಡ ತೊಟ್ಟಿಯ ನಿರ್ಮಾಣವೂ ಸೇರಿದಂತೆ ಇವರು ಇತರೆ ಸಮಾಜ ಸೇವೆಯ ಕೆಲಸಗಳಲ್ಲಿ ತೊಡಗಿದ್ದಾರೆ. ಇವರು ತಮ್ಮ ಹಳ್ಳಿಯಲ್ಲಿ ಒಂದು ಆಸ್ಪತ್ರೆಯನ್ನು ಕಟ್ಟುವ ಆಸೆಯನ್ನಿಟ್ಟುಕೊಂಡಿದ್ದಾರೆ. ಇದಕ್ಕಾಗಿ ಒಂದು ನ್ಯಾಸ ನಿಧಿಯನ್ನು ನಿಯೋಜಿಸಲಾಗಿದೆ.