welcome to lavalavika


I made this widget at MyFlashFetish.com.

Sunday, April 24, 2011

ಕೆ.ಆರ್.ನಾರಾಯಣನ್


     









      ಕೆ.ಆರ್.ನಾರಾಯಣನ್ ೧೯೨೧ರ ಫೆಬ್ರ್ರುವರಿ ೪ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಉಳವೀರ್ ಗ್ರಾಮದಲ್ಲಿ ದಲಿತ ಕುಟುಂಬವೊಂದರಲ್ಲಿ ಜನಿಸಿದರು. ಇವರ ತಂದೆ ರಾಮನ್ ಹಣವಂತರೇನಲ್ಲ; ಮನೆಮದ್ದಿನ ಗ್ರಾಮೀಣ ಚಿಕಿತ್ಸೆ ಇವರು ಕಲಿತಿದ್ದ ವಿದ್ಯೆ. ಈ ವೈದ್ಯ ವೃತ್ತಿಯಿಂದ ಜೀವನ ಸಾಗಿಸುವುದು ಕಷ್ಟವಾಗಿತ್ತು. ತಾಯಿ ಪಪ್ಪಿಯಮ್ಮ ಅತ್ಯಂತ ಕಷ್ಟದಿಂದಲೇ ಆರು ಮಕ್ಕಳ ದೊಡ್ಡ ಕುಟುಂಬವನ್ನು ಪೋಷಿಸುತ್ತಿದ್ದರು.

ಕುರುವಿಲಂಗಾಡು ಗ್ರಾಮದಲ್ಲಿರುವ ಸೇಂಟ್ ಮೇರೀಸ್ ಪ್ರೌಢಶಾಲೆಯಲ್ಲಿ ಕಲಿತ ನಾರಾಯಣನ್, ಹತ್ತನೆಯ ತರಗತಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ಅನಂತರ, ಕೊಟ್ಟಾಯಂನಲ್ಲಿನ ಸಿ.ಎಂ.ಎಸ್.ಕಾಲೇಜು ಸೇರಿದರು. ಅಲ್ಲಿ , ನಾರಾಯಣ ಪಣಿಕ್ಕರ್ ಎಂಬ ವಕೀಲರಿಂದ ಆರ್ಥಿಕ ಸಹಾಯ ಪಡೆದು ತಮ್ಮ ಶಿಕ್ಷಣವನ್ನು ಮುಂದುವರಿಸಿದರು. ಇವರಿಗೆ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇದ್ದಿತು. ಕವನಗಳನ್ನು ರಚಿಸುವುದು, ಲೇಖನಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸುವುದು ಇವರ ಹವ್ಯಾಸವಾಗಿತ್ತು.

ತಮ್ಮ ಕಾಲೇಜು ವಿದ್ಯಾಭ್ಯಾಸವನ್ನು ಮುಂದುವರಿಸಿದ ನಾರಾಯಣನ್ ,ಕೇರಳ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಗಳಿಸಿದರು.ಅನಂತರ, ಖ್ಯಾತ ಕೈಗಾರಿಕೋದ್ಯಮಿ ಜೆ.ಆರ್.ಡಿ. ಟಾಟಾರವರಿಂದ ವಿದ್ಯಾರ್ಥಿವೇತನ ಪಡೆದು ೧೯೪೫ರಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ನಿಗೆ ಪ್ರಯಾಣ ಬೆಳೆಸಿದರು. ಅಲ್ಲಿನ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಮೂರು ವರ್ಷಕಾಲ ವ್ಯಾಸಂಗ ಮಾಡಿ ರಾಜನೀತಿ ಶಾಸ್ತ್ರದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ B.Sc ಪದವಿ ಪಡೆದುಕೊಂಡು ಭಾರತಕ್ಕೆ ಹಿಂದಿರುಗಿದರು.

ಸ್ವದೇಶಕ್ಕೆ ಮರಳಿದ ಬಳಿಕ ತಿರುವಾಂಕೂರ್ ಕಲಾ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕರಾಗಿ ಕೆಲಕಾಲ ಸೇವೆ ಸಲ್ಲಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಮುಂಬೈನ Social Welfare ನಿಯತಕಾಲಿಕೆಗೆ ಲಂಡನ್ ಪ್ರತಿನಿಧಿಯಾಗಿದ್ದರು. ಈ ಅನುಭವ ಅವರನ್ನು ಪತ್ರಿಕಾರಂಗಕ್ಕೆ ಎಳೆಯಿತು. ಒಂದು ವರ್ಷಕಾಲ ಮದ್ರಾಸಿನ ಹಿಂದೂ ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದು, ಮುಂಬೈಗೆ ತೆರಳಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕಾ ಕಛೇರಿಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದರು. ಇವರ ಪ್ರತಿಭೆಯನ್ನು ಮನಗಂಡ ಪಂಡಿತ್ ಜವಹರಲಾಲ್ ನೆಹರೂರವರು ೧೯೪೯ರಲ್ಲಿ ನಾರಾಯಣ್‌ರವರನ್ನು ವಿದೇಶಾಂಗ ಇಲಾಖೆ (Indian Foreign Service)ಗೆ ಸೇರಿಸಿಕೊಂಡು ಭಾರತದ ರಾಜತಾಂತ್ರಿಕ ಪ್ರತಿನಿಧಿಯಾಗಿ ಬರ್ಮಾ (ಈಗಿನ ಮ್ಯಾನ್‌ಮಾರ್) ದೇಶಕ್ಕೆ ಕಳುಹಿಸಿಕೊಟ್ಟರು. ಅದೇಸಮಯಕ್ಕೆ ರಾಜಧಾನಿ ರಂಗೂನ್ ಪಟ್ಟಣದಲ್ಲಿ Y.W.C.A. ಕಛೇರಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಾಟಿಂಟೆಂಟ್ ಎಂಬ ಬರ್ಮಾ ಹುಡುಗಿಯನ್ನು ವರಿಸಿದರು. ಈವಿವಾಹದ ನಂತರ, ಆಕೆಯು ತಮ್ಮ ಹೆಸರನ್ನು ಉಷಾ ಎಂಬುದಾಗಿ ಬದಲಾಯಿಸಿಕೊಂಡರು.

ವರ್ಷಗಳು ಕಳೆದಂತೆ ನಾರಾಯಣನ್ ಥೈಲ್ಯಾಂಡ್, ಟರ್ಕಿ, ಜಪಾನ್, ಚೀನಾ ಮೊದಲಾದ ದೇಶಗಳಲ್ಲಿ ಭಾರತದ ರಾಯಭಾರಿಯಾಗಿದ್ದು ಕಾರ್ಯನಿರ್ವಹಣೆ ಮಾಡಿ ಅಪಾರ ಅನುಭವ ಗಳಿಸಿದರು.೧೯೭೬ರಲ್ಲಿ ಭಾರತದ ರಾಯಭಾರಿಯಾಗಿ ಚೀನಾದೇಶಕ್ಕೆ ತೆರಳಿದ್ದಲ್ಲದೆ, ಚೀನೀ ಭಾಷೆಯನ್ನು ಕಲಿತು ಅಲ್ಲಿನ ಜನರ ಮನಸ್ಸನ್ನು ಸೂರೆಗೊಂಡರು. ಇವರು ಆಸ್ಟ್ರೇಲಿಯಾದಲ್ಲಿ ಕಾರ್ಯವಾಹಕ ಹೈಕಮೀಷನರ್ ಆಗಿಯೂ, ಹಾನಾಯ್‌ನಲ್ಲಿ ಭಾರತದ Consul General ಆಗಿಯೂ ಸೇವೆ ಸಲ್ಲಿಸಿದ್ದಾರೆ.

ನಂತರ, ಇವರು ಭಾರತದ ವಿದೇಶಾಂಗ ವ್ಯವಹಾರಗಳ ಖಾತೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ೧೯೭೮ರಲ್ಲಿ ಸರ್ಕಾರೀ ಸೇವೆಯಿಂದ ನಿವೃತ್ತರಾದರು. ಆ ನಂತರ, ೧೯೭೯ರಲ್ಲಿ ಜವಹರಲಾಲ್‌ನೆಹರೂ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನೇಮಕಗೊಂಡರು. ಆ ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾದ ಇವರು ೧೯೮೦ರಲ್ಲಿ ಭಾರತದ ರಾಯಭಾರಿಯಾಗಿ ಅಮೆರಿಕಾ ದೇಶಕ್ಕೆ ತೆರಳಿದರು.

ರಾಜಕಾರಣದಲ್ಲಿ ಸುದೀರ್ಘ ಅನುಭವ ಪಡೆದ ನಾರಾಯಣನ್ ೧೯೮೪ರಲ್ಲಿ ರಾಜಕೀಯ ರಂಗ ಪ್ರವೇಶಿಸಿದರು, ಕೇರಳದ ಒಟ್ಟಪಾಳಂ ಲೋಕಸಭಾಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಗೊಂಡರು. ರಾಜೀವ್ ಗಾಂಧೀ ಮಂತ್ರಿ ಮಂಡಲದಲ್ಲಿ ೧೯೮೫ರಿಂದ ೧೯೮೯ರವರೆಗೆ ಯೋಜನೆ, ವಿದೇಶಾಂಗ ಖಾತೆ, ವಿಜ್ಞಾನ, ತಂತ್ರಜ್ಞಾನ, ಅಣು ಶಕ್ತಿ, ಬಾಹ್ಯಾಕಾಶ, ಎಲೆಕ್ಟ್ರಾನಿಕ್ಸ್, ಸಾಗರ ಅಭಿವೃದ್ಧಿಕ್ಷೇತ್ರಗಳಲ್ಲಿ ಸಹಾಯಕ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದರು. ಇವರು C.S.I.R. ನ ಉಪಾಧ್ಯಕ್ಷರಾಗಿಯೂ ಕೆಲಸಮಾಡಿದ್ದಾರೆ. ಇವರು ಪ್ಯಾರಿಸ್‌ನ Universal Academy of Cultures ಸಂಸ್ಥೆಯ ಸದಸ್ಯರೂ ಆಗಿದ್ದರು. ಅಲ್ಲದೆ ವಿಶ್ವ ಸಂಸ್ಥೆ ಹಾಗೂ ಅಲಿಪ್ತದೇಶಗಳ ಸಮ್ಮೇಳನಗಳಲ್ಲಿ ಭಾರತೀಯ ನಿಯೋಗಗಳ ಮುಂದಾಳುತನ ವಹಿಸಿ, ಭಾರತದ ನಿಲುವನ್ನು ಅತ್ಯಂತ ಸಮರ್ಥವಾಗಿ ಪ್ರತಿಪಾದಿಸಿದ್ದಾರೆ.

೧೯೮೯ ಮತ್ತು ೧೯೯೧ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲೂ ಜಯಗಳಿಸಿ ಲೋಕಸಭೆಯನ್ನು ಸತತವಾಗಿ ಪ್ರವೇಶಿಸಿದ ನಾರಾಯಣನ್, ೧೯೯೨ರ ಆಗಸ್ಟ್ ೨೧ರಂದು ಉಪರಾಷ್ಟ್ರಪತಿ ಸ್ಥಾನವನ್ನಲಂಕರಿಸಿ ಯಶಸ್ವಿಯಾಗಿ ಆಡಳಿತ ನಡೆಸಿದರು. ನಂತರ, ೧೯೯೭ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಚುನಾಯಿತರಾಗಿ ಬಂದು, ೧೯೯೭ರ ಜುಲೈ ೨೫ರಂದು ಭಾರತದ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಾಲೇಜು ಶಿಕ್ಷಕ, ಪತ್ರಕರ್ತ, ರಾಯಭಾರಿ, ವಿಶ್ವವಿದ್ಯಾಲಯದ ಕುಲಪತಿ, ರಾಜಕೀಯ ತಂತ್ರಜ್ಞ, ಲೋಕ ಸಭಾಸದಸ್ಯ, ಕೇಂದ್ರ ಸಂಪುಟದಲ್ಲಿ ಮಂತ್ರಿ, ಉಪರಾಷ್ಟ್ರಪತಿ-ಹೀಗೆ ವೈವಿಧ್ಯಮಯವಾದ ವೃತ್ತಿ ಹಾಗೂ ಪ್ರವೃತ್ತಿ ಜೀವನದ ಅನುಭವವಿರುವ ಕೆ.ಆರ್.ನಾರಾಯಣನ್ ರಾಷ್ಟ್ರಪತಿಯ ಸ್ಥಾನ ಅಲಂಕರಿಸಿದ್ದು ಸಾಮಾಜಿಕ ನ್ಯಾಯಕ್ಕೆ ತಂದ ಗೌರವ.

ದೇಶದ ವಿವಿಧ ಸಾಂಸ್ಕೃತಿಕ ಸಂಸ್ಥೆಗಳು, ಸಾರ್ವಜನಿಕ ಸೇವಾಸಂಸ್ಥೆಗಳು, ರಾಮಕೃಷ್ಣಮಿಷನ್ ಇತ್ಯಾದಿ ಸಂಘ ಸಂಸ್ಥೆಗಳೊಂದಿಗೆ ನಾರಾಯಣನ್ ನಿಕಟ ಸಂಬಂಧ ಹೊಂದಿದ್ದಾರೆ.ಇವರು, ಅನೇಕ ದೇಶೀಯ ಮತ್ತು ಅಂತರ ರಾಷ್ಟ್ರೀಯ ಸಾಧನೆಗಳಿಗಾಗಿ ನೀಡುವ ಪ್ರಶಸ್ತಿ ಹಾಗೂ ಬಹುಮಾನಗಳ ತೀರ್ಪುಗಾರ ಸಮಿತಿಗಳ ಅಧ್ಯಕ್ಷರೂ ಆಗಿದ್ದಾರೆ.

ಅಲಿಪ್ತ ನೀತಿಯ ಬಗ್ಗೆ ಹೆಚ್ಚು, ಪರಿಣತಿ ಹೊಂದಿರುವ ನಾರಾಯಣನ್ ಅವರಿಗೆ ೧೯೭೦-೭೨ರ ಅವಧಿಯಲ್ಲಿ ಪಂಡಿತ ಜವಹರಲಾಲ್ ನೆಹರೂ ರವರ ಅಲಿಪ್ತ ನೀತಿಯ ಬಗ್ಗೆ ವಿಶೇಷ ಅಧ್ಯಯನ ನಡೆಸಲು ಜವಹರಲಾಲ್ ನೆಹರೂ ಫೆಲೋಷಿಪ್ ನೀಡಲಾಗಿತ್ತು ನಾಯಾಯಣನ್ ವಿದ್ಯಾರ್ಜನೆ ಮಾಡಿದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯ ಗೌರವ ಫೆಲೋಷಿಪ್ ಸಹ ಅವರಿಗೆ ಸಂದಿದೆ. ನೂಯಾರ‍್ಕ್‌ನ The Appeal of Conscience Foundation ಸಂಸ್ಥೆಯು ೧೯೯೮ರಲ್ಲಿ World Statesman Award ಎಂಬ ಗೌರವವನ್ನು ಅವರಿಗೆ ನೀಡಿತು. ದೇಶ ವಿದೇಶಗಳ ಅನೇಕ ವಿಶ್ವವಿದ್ಯಾಲಯಗಳಿಂದಲೂ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಲಭ್ಯವಾಗಿವೆ.

ನಾರಾಯಣನ್ ಪಾಂಡಿತ್ಯ ಪೂರ್ಣ ಲೇಖನಗಳನ್ನು ಬರೆಯುವುದರಲ್ಲೂ ಸಿದ್ಧ ಹಸ್ತರು. ರಾಜಕೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳನ್ನು ಕುರಿತಾದ ಅವರ ಲೇಖನಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ಭಾರತ-ಅಮೆರಿಕಾ ಬಾಂಧವ್ಯ, ಅಲಿಪ್ತ ನೀತಿ ಮೊದಲಾದ ವೈಚಾರಿಕ ಸಂಗತಿಗಳನ್ನು ಕುರಿತು ಶ್ರೀಯುತರು ಗ್ರಂಥರಚನೆ ಮಾಡಿದ್ದಾರೆ. Images and Insights ಎಂಬುದು ಅವರ ಪ್ರಮುಖ ಗ್ರಂಥಗಳಲ್ಲೊಂದು. ಇವರು ೦೯.೧೧.೨೦೦೫ರಂದು ನಿಧನರಾದರು.

No comments:

Post a Comment