ವೈದೇಹಿ ಕಾವ್ಯನಾಮದಲ್ಲಿ ಬರೆಯುವವರು ಶ್ರೀಮತಿ ಜಾನಕಿ ಶ್ರೀನಿವಾಸಮೂರ್ತಿ (೧೨, ಫೆಬ್ರವರಿ ೧೯೪೫). ಕುಂದಾಪುರ ಇವರ ಊರು. ಬಿಕಾಂ ಪದವೀಧರರಾದ ವೈದೇಹಿ ಇದುವರೆಗೆ ೩೨ ಕೃತಿಗಳನ್ನು ಪ್ರಕಟಿಸಿದ್ದಾರೆ.
ಮರ ಗಿಡ ಬಳ್ಳಿ (೧೯೭೯), ಅಂತರಂಗದ ಪುಟಗಳು (೧೯೮೪), ಗೋಲ (೧೯೮೬), ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗಳು (೧೯೯೧) ಇವರ ಮುಖ್ಯ ಕಥಾ ಸಂಕಲನಗಳು. ಬಿಂದು ಬಿಂದಿಗೆ (೧೯೯೦), ಪಾರಿಜಾತ (೧೯೯೯) ಕವನ ಸಂಕಲನಗಳು. ಮಲ್ಲಿನಾಥನ ಧ್ಯಾನ (೧೯೯೬) ಅಂಕಣ ಬರಹದ ರೂಪದಲ್ಲಿ ಪ್ರಕಟಗೊಂಡ ಇವರ ಪ್ರಬಂಧ ಸಂಕಲನ. ಬೆಳ್ಳಿಯ ಸಂಕೋಲೆಗಳು ಸ್ತ್ರೀಯರ ಸ್ಥಿತಿಗತಿಗಳನ್ನು ಕುರಿತು ಮೈತ್ರೇಯಿ ಮುಖ್ಯೋಪಾಧ್ಯಾಯ ಅವರ ಲೇಖನಗಳ ಅನುವಾದ. ಹತ್ತು ಮಕ್ಕಳ ನಾಟಕಗಳನ್ನು, ಬಿ.ವಿ ಕಾರಂತ, ಸರಸ್ವತೀಬಾಯಿ ರಾಜವಾಡೆ ಇಂಥ ಮಹನೀಯರ ಜೀವನ ಚಿತ್ರಗಳನ್ನು ರಚಿಸಿದ್ದಾರೆ.
ವೈದೇಹಿ ಅವರ ಹಲವು ಕಥೆಗಳು ಮರಾಠಿ, ಮಲೆಯಾಳಿ, ತಮಿಳು, ತೆಲುಗು, ಹಿಂದಿ, ಗುಜರಾತಿ, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. 'ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು' ಕಥೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ ಸಿನಿಮಾ 'ಗುಲಾಬಿ ಟಾಕೀಸು' ಸಧ್ಯದಲ್ಲೇ (೨೦೦೮) ಬಿಡುಗಡೆಯಾಗಲಿದೆ. ಬೆಂಗಳೂರು ದೂರದರ್ಶನ ಕೇಂದ್ರ ದಿಂದ 'ಅಕ್ಕು' ಕತೆ ಆಧರಿಸಿ ಟೆಲಿಚಿತ್ರದ ನಿರ್ಮಾಣ, ಟೆಲಿಪ್ರಸಾರಗೊಂಡಿದೆ. ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಂ ಕೆ ಇಂದಿರಾ ಪ್ರಶಸ್ತಿ, ಕರ್ನಾಟಕ ರಾಜ್ಯದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ೧೪ ಪ್ರಶಸ್ತಿಗಳು ವೈದೇಹಿಯವರಿಗೆ ಸಂದಿವೆ.
No comments:
Post a Comment